ಬಂಡೀಪುರ-ನಾಗರಹೊಳೆ ಸಫಾರಿ ಹೋಗೋರಿಗೆ 1 ಕೋಟಿ ರೂ. ವಿಮಾ ಸೌಲಭ್ಯ

ಮೈಸೂರು: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಬಸ್ ಮತ್ತು ಜೀಪ್‌ಗಳಲ್ಲಿ ಹುಲಿ ಸಫಾರಿ ಸೇರಿದಂತೆ ಪರಿಸರ ಪ್ರವಾಸೋದ್ಯಮ ವಲಯಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮಾ ರಕ್ಷಣೆಯನ್ನು ವಿಸ್ತರಿಸಿದ್ದಾರೆ.

 

ಬಂಡಿಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಸಂದರ್ಭದಲ್ಲಿ ಕಾಡು ಪ್ರಾಣಿಗಳ ದಾಳಿ ಸೇರಿದಂತೆ ಇತರೆ ಯಾವುದೇ ಅವಘಡದ ಸಂದರ್ಭಗಳಲ್ಲಿ ಪ್ರವಾಸಿಗರ ಜೀವ ಹಾನಿಯಾದರೆ 1 ಕೋಟಿ ವಿಮಾ ಮೊತ್ತ ಪ್ರವಾಸಿಗರ ಕುಟುಂಬದವರಿಗೆ ಸಿಗಲಿದೆ. ಈ ಯೋಜನೆಗೆ ಅರ್ಹರಾಗಲು ಯಾವುದೇ ನೋಂದಣಿ ಅಗತ್ಯವಿಲ್ಲ, ಸಫಾರಿಗೆ ಹೋಗಿರುವ ಟಿಕೆಟ್ ಇದ್ದರೆ ಸಾಕು. ಕಾಡಿನೊಳಗೆ ಪ್ರಾಣ ಹಾನಿ ಸಂಭವಿಸಿದರೆ ಆರ್ಥಿಕ ನೆರವು ಸಿಗಲಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶ‌ಕ ರಮೇಶ್‌ಕುಮಾರ್ ಮಾಹಿತಿ ನೀಡಿದ್ದಾರೆ.

 

ಸಾರ್ವಜನಿಕ ಹೊಣೆಗಾರಿಕೆ ನಾನ್ ಇಂಡಸ್ಟ್ರಿಯಲ್ ಪಾಲಿಸಿಯ ಅಡಿಯಲ್ಲಿ ಈ ಯೋಜನೆ ಜಾರಿ ತರಲು ಉದ್ದೇಶಿಸಲಾಗಿದ್ದು, ಪ್ರವಾಸಿಗರು ಎದುರಿಸುವ ಯಾವುದೇ ಅಪಾಯ/ ಅಹಿತಕರ ಘಟನೆಗಳಿಗೆ 1 ಕೋಟಿ ರೂ. ವಿಮಾ ಮೊತ್ತ ನಿಗದಿಪಡಿಸಲಾಗಿದೆ. ಬಂಡೀಪುರದ ಸಫಾರಿಗೆ ಪ್ರತಿ ವರ್ಷ 1.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಾರೆ. ಸಫಾರಿ ವೇಳೆ ಆನೆ, ಹುಲಿ ಚಿರತೆ ಹಾಗೂ ಕಾಡೆಮ್ಮೆಗಳು ಪ್ರವಾಸಿಗರ ವಾಹನದ ಮೇಲೆ ದಾಳಿ ಮಾಡುವ ಅಪಾಯ ಇರುತ್ತದೆ. ಹೀಗಾಗಿ ವಿಮೆ ಯೋಜನೆ ಜಾರಿಗೊಳಿಸಲಾಗಿದೆ.

 

ನಾಗರಹೊಳೆ ಅಧಿಕಾರಿಗಳು ವಾರ್ಷಿಕ 70,000 ರೂ. ಪ್ರೀಮಿಯಂ ಪಾವತಿಸಿದ್ದರೆ, ಬಂಡೀಪುರ ಅಧಿಕಾರಿಗಳು CGST ಮತ್ತು SGST ಹೊರತುಪಡಿಸಿ 80,000 ರೂ. ಪಾವತಿಸುತ್ತಾರೆ. ಎರಡೂ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರ ಪ್ರಕಾರ, ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರು ಎದುರಿಸುವ ಅಪಾಯವನ್ನು ಸರಿದೂಗಿಸಲು ಆಡಳಿತ ಮಂಡಳಿಗಳು ವಿಮಾ ಪಾಲಿಸಿಗಳನ್ನು ಖರೀದಿಸಿದವು. ಮೀಸಲು ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರು ಎದುರಿಸುವ ಯಾವುದೇ ಅಪಾಯ ಮತ್ತು ಅಹಿತಕರ ಘಟನೆಗಳಿಗೆ ನಾವು ವಿಮೆ ಮಾಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.