ರೈತನೇ ಮಾತ್ರ ಮಹಾಶ್ರೇಷ್ಠ”

ರೈತನೇ ಮಾತ್ರ ಮಹಾಶ್ರೇಷ್ಠ”

ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಾವು ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತನ ಶ್ರಮದ ಫಲವೇ ಮುಖ್ಯಕಾರಣ. ಏಕೆಂದರೆ ಉಪಹಾರ ಮತ್ತು ಊಟದಲ್ಲಿ ಬಳಸುವ ಪ್ರತಿಯೊಂದು ಪದಾರ್ಥದಲ್ಲಿಯೂ ರೈತನ ಶ್ರಮ ಅಡಗಿರುತ್ತದೆ.

 

 

ಇಂತಹ ರೈತನಿಗೆ ನಾವೆಲ್ಲರೂ ಕೃತಜ್ಞರಾಗಿರಲೇಬೇಕು. ನಮಗೆಲ್ಲರಿಗೂ ಇಂದು ಡಾಕ್ಟರ್‌, ಲಾಯರ್‌, ಎಂಜಿನಿಯರ್‌ಗಳು, ವ್ಯಾಪಾರಸ್ಥ, ಬ್ಯುಸಿನೆಸ್ ಮ್ಯಾನ್ ಮುಖ್ಯ ಎನಿಸುತ್ತಾರೆ. ಆದರೆ ಇವರೆಲ್ಲರಿಗಿಂತಲೂ ಮೂರು ಹೊತ್ತು ಅನ್ನಕ್ಕೆ ಕಾರಣವಾಗಿರುವ ರೈತನ ನೆನಪು ಮಾತ್ರ ಬರುವುದಿಲ್ಲ. ಇವರೆಲ್ಲರಿಗಿಂತಲೂ “ರೈತನೇ ಏಕೆ ಮಾತ್ರ ಮಹಾಶ್ರೇಷ್ಠ” ಎಂಬುದಕ್ಕೆ ಇಲ್ಲೊಂದು ಚಿಕ್ಕ ಕತೆ ಹೇಳುತ್ತೇನೆ ಕೊನೆಯವರೆಗೆ ಓದಿ…

 

 

ಒಂದು ಊರಲ್ಲಿ ಒಬ್ಬ ರಾಜನಿದ್ದನಂತೆ ಆತನಿಗೆ ತನ್ನ ಹುಟ್ಟಿದ ಹಬ್ಬದ ಸಂದರ್ಭದಲ್ಲಿ ರಾಜ್ಯದ ಅತ್ಯಂತ ಶ್ರೇಷ್ಠ ವ್ಯಕ್ತಿಯನ್ನು ಗೌರವಿಸಬೇಕೆಂದು ಅಂದುಕೊಂಡಿದ್ದ. ರಾಜನ ಕಾಲದಲ್ಲಿ ಸನ್ಮಾನವೆಂದರೆ ಕೇವಲ ಹೂಗುಚ್ಚ ನೀಡುವುದಲ್ಲ, ವಜ್ರ ವೈಡೂರ್ಯಗಳನ್ನು ಕೊಟ್ಟು ಸನ್ಮಾನಿಸಲಾಗುತ್ತಿತ್ತು.

 

ಎಲ್ಲಾ ಮಂತ್ರಿಗಳನ್ನು ಕರೆದು ರಾಜ್ಯದ ಶ್ರೇಷ್ಠ ವ್ಯಕ್ತಿಯನ್ನು ಸನ್ಮಾನಿಸಬೇಕು ಎಂದು ಪ್ರಕಟಣೆ ಹೊರಡಿಸಿದ. ರಾಜನ ಪ್ರಕಟಣೆ ಕೇಳಿದ್ದೇ ತಡ ರಾಜ್ಯದಲ್ಲಿರುವ ವೈದ್ಯರು, ಎಂಜಿನಿಯರ್‌ಗಳು, ಸಮಾಜ ಸುಧಾರಕರು, ಕ್ರೀಡಾಪಟುಗಳು, ಸಂಗೀತಗಾರರು, ನೃತ್ಯಪಟುಗಳು, ವ್ಯಾಪಾರಸ್ಥರು, ಜ್ಯೋತಿಷಿಗಳು, ಪರ್ವತಾರೋಹಿಗಳು, ಉದ್ಯಮಿಗಳು, ವಕೀಲರು, ಪೊಲೀಸರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ರಾಜನ ಆಸ್ಥಾನಕ್ಕೆ ಬಂದು ತಾವು ತಾವೇಕೆ ಶ್ರೇಷ್ಠ ವ್ಯಕ್ತಿಗಳು ಎಂದು ವಿವರಿಸಿ ಹೋದರು.

 

 

ಆದರೆ, ಅಷ್ಟರಲ್ಲಿ ಆಸ್ಥಾನದಲ್ಲಿ ಒಂದು ಘಟನೆ ನಡೆದಿತ್ತು. ಅದು ರಾಜ ಮತ್ತು ಮಂತ್ರಿಗಳ ಗಮನಕ್ಕೂ ಬಂದಿರಲಿಲ್ಲ. ಹೌದು ಮೈಯೆಲ್ಲಾ ಕೆಸರು ಮಯವಾಗಿರುವ, ತಲೆಗೆ ಶಾಲು ಸುತ್ತಿದ್ದ ವ್ಯಕ್ತಿಯೊಬ್ಬ ಓಡುತ್ತ ಬಂದು ರಾಜನ ಆಸ್ಥಾನಕ್ಕೆ ಪ್ರವೇಶ ಮಾಡಲು ಯತ್ನಿಸಿದ್ದ. ಮೈಯಲ್ಲಾ ಕೆಸರುಮಯ ಆಗಿದ್ದನ್ನು ನೋಡಿ ಬಾಗಿಲ ಕಾವಲುಗಾರರು ರಾಜನ ಆಸ್ಥಾನದಲ್ಲಿ ಪ್ರವೇಶ ಮಾಡಲು ಅವಕಾಶವನ್ನೇ ನೀಡಲಿಲ್ಲ.

 

 

“ಏ ಭಿಕ್ಷುಕ, ನೀನು ಒಳಗೆ ಹೋಗಲು ಸಾಧ್ಯವಿಲ್ಲ” ಎಂದು ಆತನನ್ನು ತಡೆದುಬಿಟ್ಟರು. “ನಾನು ಭಿಕ್ಷುಕನಲ್ಲ, ರೈತ.  ಈ ರಾಜ್ಯದ ಎಲ್ಲರಿಗೂ ಬೇಕಾಗುವ ಆಹಾರ ಧಾನ್ಯಗಳನ್ನು ಬೆಳೆದು ಕೊಡುವವನು” ಎಂದು ಎಷ್ಟೇ ಹೇಳಿದರೂ ಕಾವಲುಗಾರರು ಆತನನ್ನು ಒಳಕ್ಕೆ ಬಿಡಲೇ ಇಲ್ಲ. ಇದರಿಂದ ಬೇಸರಗೊಂಡ ಆ ರೈತ ಮನೆಗೆ ಹೋಗಿ ಮಲಗಿಬಿಟ್ಟ.

 

 

ಮುಂದಿನ ವರ್ಷ ರಾಜನ ಹುಟ್ಟು ಹಬ್ಬ ಬಂತು. ಶ್ರೇಷ್ಠ ವ್ಯಕ್ತಿಯನ್ನು ಸನ್ಮಾನ ಮಾಡಲು ರಾಜ ಸಿದ್ಧನಾಗಿ ಕುಳಿತಿದ್ದ. ರಾಜನಿಗೆ ಯಾರ್ಯಾರು ಶ್ರೇಷ್ಠವೆಂದು ಅರ್ಜಿ ಹಾಕಿದ್ದರೋ ಅವರೆಲ್ಲರನ್ನು ಆಹ್ವಾನಿಸಿ ಎಂದು ಮಂತ್ರಿಗಳಿಗೆ ಹೇಳಿದ.

 

 

ಆದರೆ, ಎಂಜಿನಿಯರ್, ವೈದ್ಯ, ಪರ್ವತಾರೋಹಿ, ವಿದ್ವಾಂಸ, ಈಜುಗಾರ, ಸಮಾಜ ಸುಧಾರಕ, ಕ್ರೀಡಾಸಾಧಕ ಹಾಗೂ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಯಾರೂ ಆಸ್ಥಾನ ದತ್ತ ಸುಳಿಯಲೇ ಇಲ್ಲ. ಇದರಿಂದಾಗಿ ಆಶ್ಚರ್ಯಚಕಿತರಾದ ರಾಜ ತನ್ನ ಹುಟ್ಟುಹಬ್ಬಕ್ಕೆ ಒಬ್ಬರೂ ಬರಲಿಲ್ಲವೇ..? ಕೂಡಲೇ ರಾಜ ಮಂತ್ರಿಯನ್ನು ಕರೆದು ಏಕೆ ಯಾರೂ ಬಂದಿಲ್ಲ ಎಂದು ಕೇಳಿದ. ತಕ್ಷಣವೇ ಬೇಹುಗಾರರನ್ನು ಕಳುಹಿಸಿ ವಿಷಯ ತಿಳಿದುಕೊಂಡು ಬರಲು ಕಳುಹಿಸಿದಾಗ ನಿಜವಾದ ಸಂಗತಿ ಗೊತ್ತಾಯಿತು.

 

 

ಕಳೆದ ಬಾರಿ ರಾಜನ ಆಸ್ಥಾನ ಪ್ರವೇಶಿಸಲು ಸಾಧ್ಯವಾಗದ್ದರಿಂದ ರೈತ ಮನೆಯಲ್ಲಿಯೇ ಮಲಗಿಬಿಟ್ಟಿದ್ದ. ಆತ ಮಲಗಿದ್ದರಿಂದ ಈ ವರ್ಷ ಆಹಾರಧಾನ್ಯದ ಉತ್ಪಾದನೆಯೇ ಆಗಿರಲಿಲ್ಲ. ಆಹಾರ ಇಲ್ಲದ್ದರಿಂದ ತಾವೇ ಶ್ರೇಷ್ಠ ಅಂದುಕೊಂಡಿದ್ದ ಯಾವುದೇ ವ್ಯಕ್ತಿಗೂ ರಾಜನ ಆಸ್ಥಾನಕ್ಕೆ ಬರುವಷ್ಟು ಶಕ್ತಿಯೇ ಇರಲಿಲ್ಲ.

 

 

ಈ ವಿಷಯ ರಾಜನಿಗೆ ಗೊತ್ತಾದ ತಕ್ಷಣವೇ ತನ್ನ ರಾಜ್ಯದಲ್ಲಿ ಅತ್ಯುತ್ತಮ ಶ್ರೇಷ್ಠ ವ್ಯಕ್ತಿ ಬೇರಾರು ಅಲ್ಲ, ರಾಜ್ಯಕ್ಕೆ ಅನ್ನ ಕೊಡುವ ವ್ಯಕ್ತಿಯೇ ಶ್ರೇಷ್ಠ, ಅವನೇ ಅನ್ನದಾತನೆಂದುಕೊಂಡು ನೇರವಾಗಿ ರೈತನ ಮನೆಗೆ ಹೋಗಿ ಆತನನ್ನು ಸತ್ಕರಿಸಿದ. ಜೊತೆಗೆ ಕಳೆದ ಬಾರಿ ರಾಜಭಟರು ಅರಮನೆಗೆ ಪ್ರವೇಶ ನಿರಾಕರಿಸಿದ್ದಕ್ಕಾಗಿ ಕ್ಷಮೆಯನ್ನೂ ಕೋರಿದ. ಅನ್ನದಾತನಿದ್ದರೆ ಮಾತ್ರ ಅರಮನೆ ಎನ್ನುವುದು ಆ ರಾಜನಿಗೆ ಅರ್ಥವಾಗಿತ್ತು. ಅನ್ನದಾತ ಮುನಿದರೆ ಯಾರೂ ಯಾವುದೇ ಸಾಧನೆ ಮಾಡುವುದು ಅಸಾಧ್ಯ ಎನ್ನುವುದೂ ಆತನಿಗೆ ಗೊತ್ತಾಯಿತು.

 

 

“ಕೃಷಿ ಹಾಗೂ ರೈತನ ಅಗತ್ಯತೆ ಸಮಾಜಕ್ಕೆ ಎಷ್ಟಿದೆ ಎಂಬುದು ಈ ಕತೆಯಿಂದಲೇ ನಮಗೆ ತಿಳಿಯುತ್ತದೆ”.

“ನೇಗಿಲ ತುದಿಯೊಳಗಡಗಿದೆ ಕರ್ಮ, ನೇಗಿಲ ಮೇಲೆ ನಿಂತಿದೆ ಧರ್ಮ”

ಎನ್ನುವ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳು ವೇದಿಕೆಗಳ ಮೇಲೆ ರಾಜಕಾರಣಿಗಳ ಬಾಯಲ್ಲಿ ಹರಿದಾಡುತ್ತಿದ್ದರೂ ರೈತರು ಇಂದಿಗೂ ಸಹ ತನ್ನ ಬೆಳೆಗೆ ಬೆಲೆ ನಿಗದಿ ಮಾಡದ ಪರಿಸ್ಥಿತಿಯಲ್ಲಿದ್ದಾನೆ. ರೈತನಿಂದ ಖರೀದಿ ಮಾಡಿದ ವ್ಯಾಪಾರಸ್ಥರು ಆ ಬೆಳೆಗೆ ಬೆಲೆ ಕಟ್ಟಿ ಅದನ್ನೇ ದುಬಾರಿ ಬೆಲೆಗೆ ರೈತನಿಗೆ ಮಾರುತ್ತಿರುವುದು ದುರ್ದೈವದ ಸಂಗತಿ…

 

ಲೇಖಕರು : ವಿಶ್ವಾಸ್ .ಡಿ . ಗೌಡ
ಸಕಲೇಶಪುರ

Leave A Reply

Your email address will not be published.