ಕಲ್ಪನೆಗೆ ಅವಕಾಶವಿಲ್ಲದ ವಾಸ್ತವ ಚೌಕಟ್ಟಿನ ಬರವಣಿಗೆ-ಮಾನವ ಜನ್ಮ ದೊಡ್ಡದು

ಕಲ್ಪನೆಗೆ ಅವಕಾಶವಿಲ್ಲದ ವಾಸ್ತವ ಚೌಕಟ್ಟಿನ ಬರವಣಿಗೆ-ಮಾನವ ಜನ್ಮ ದೊಡ್ಡದು
ಗೊರೂರು ಅನಂತರಾಜುರವರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸುವ ಮೂಲಕ ಈಗಾಗಲೇ ಹಾಸನದ ಸಾಹಿತ್ಯ ವಲಯಕ್ಕೆ ಚಿರಪರಿಚಿತರಾಗಿದ್ದಾರೆ. ಲೇಖನ, ನಾಟಕ, ವಿಮರ್ಶೆ, ಚುಟುಕು, ಕವನ, ಹನಿಗವನ ಹೀಗೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡುತ್ತ ಬಂದಿರುವ  ಗೊರೂರು ಅನಂತರಾಜು ಪ್ರಸ್ತುತ ಹಾಸನದ ಮನೆ ಮನೆ ಕವಿಗೋಷ್ಠಿಯ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

 

 

‘ಮಾನವ ಜನ್ಮ ದೊಡ್ಡದು’ ಶೀರ್ಷಿಕೆಯ ಕೃತಿ ಅವರ ಲೇಖನಗಳ ಸಂಕಲನವಾಗಿದೆ. ಈ ಸಂಕಲನದಲ್ಲಿ ಒಟ್ಟು 23 ಲೇಖನಗಳಿವೆ. ಮೊದಲ ಲೇಖನದ ಶೀರ್ಷಿಕೆಯೇ ಕೃತಿಯ ಹೆಸರಾಗಿದೆ. ಪುರಂದರದಾಸರ ಕೀರ್ತನೆಯ ಒಂದು ಸಾಲನ್ನು ಆಧರಿಸಿ ಬರೆದ ಈ ಲೇಖನದಲ್ಲಿ ಮಾನವ ಜನ್ಮವನ್ನು ಹಿರಿದಾಗಿಸಿಕೊಳ್ಳುವ ವಿಷಯವನ್ನು ಸಂಕ್ಷಿಪ್ತವಾಗಿ ಅನೇಕ ಉದಾಹರಣೆಗಳ ಸಹಿತ ತಿಳಿಸಿದ್ದಾರೆ.

 

 

ಭಾರತದ ಆದಿಕವಿ ವಾಲ್ಮೀಕಿ ಎಂಬ ಎರಡನೆಯ ಲೇಖನದಲ್ಲಿ ಆದಿಕವಿ ವಾಲ್ಮೀಕಿಯನ್ನು ಕುರಿತಂತೆ ಮತ್ತು ರಾಮಾಯಣದ ಕೃತಿಯನ್ನು ಕುರಿತಂತೆ ಅನೇಕ ವಿಷಯವನ್ನು ಕ್ರೋಢೀಕರಿಸಿ ದಾಖಲಿಸಿದ್ದಾರೆ. ಗೌರಿ ಹಬ್ಬಕ್ಕೆ ತವರಿಗೆ ಬಾರೆ ಎನ್ನುವ ಲೇಖನದಲ್ಲಿ ಕರೋನಾ ಸಮಯದಲ್ಲಿನ ಗೌರಿಹಬ್ಬದ ಆಚರಣೆಯನ್ನು ನವಿರಾದ ಹಾಸ್ಯದೊಂದಿಗೆ ನಿರೂಪಿಸಿರುವ ಲೇಖಕರು ಮುಂದಿನ ಲೇಖನದಲ್ಲಿ ಗಣೇಶೋತ್ಸವವನ್ನು ಕುರಿತು ಬರೆಯುವಾಗ ಪುರಾಣದ ಕಥೆಗಳು ಮಾತ್ರವಲ್ಲದೆ ಸಾರ್ವಜನಿಕ ಗಣೇಶೋತ್ಸವದ ಪದ್ಧತಿ ಪ್ರಾರಂಭವಾದ ವಿಷಯವನ್ನು ಉಲ್ಲೇಖಿಸಿದ್ದಾರೆ.

 

 

ಪುಟಗಳನ್ನು ತೆರೆದಂತೆ ಶಿವರಾತ್ರಿಯ ಹಬ್ಬದ ಮಹತ್ವ, ಆಚರಣೆಯ ವಿಧಾನ, ಕಾರಣ, ಶಿವನ ಮಹಿಮೆ ಹಾಗೂ ರೂಪಗಳನ್ನು ಕುರಿತಾದ ವಿವರಣೆಗಳಿವೆ. ಸುಗ್ಗಿಯ ಹಬ್ಬ ಸಂಕ್ರಾಂತಿ ಮತ್ತು ಕಿತ್ತೂರು ರಾಣಿ ಚನ್ನಮ್ಮನನ್ನು ಕುರಿತಾದ ಲೇಖನಗಳಲ್ಲಿ ವಿವರಣೆಯೊಂದಿಗೆ ಜಾನಪದ ಸಾಹಿತ್ಯದಲ್ಲಿ ದಾಖಲಾದ ಜನಪದ ಆಚರಣೆಗಳನ್ನು ಸೇರಿಸಿರುವುದು ವಿಶೇಷವಾಗಿದೆ.

 

 

ರೈಲು ಪ್ರಯಾಣದ ಸ್ವಾನುಭವವನ್ನು ಕುರಿತ ಲೇಖನದಲ್ಲಿ ರೈಲು ಪ್ರಯಾಣ ಹಿತಕರವೆನಿಸಿದರೂ ಕೆಲವೊಮ್ಮೆ ಪ್ರಯಾಣ ಪ್ರಯಾಸವಾಗಿ ಸಮಸ್ಯೆಗಳಿಗೆ ಕಾರಣವಾಗುವ ಬಗೆಯನ್ನು ಒಳಗೊಂಡಿದೆ. ಸಾಕ್ಷರತಾ ಆಂದೋಲನದಲ್ಲಿ ಲೇಖಕರು ಪಡೆದ ಅನುಭವ ‘ಸಾಕ್ಷರ ರಾಗೋಣ’ ಎನ್ನುವ ಲೇಖನದಲ್ಲಿ ಸುದೀರ್ಘವಾಗಿ ಮೂಡಿಬಂದಿದೆ.

 

 

ಮುಂದಿನ ಲೇಖನಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಸಮಾನತೆ, ಸಹಕಾರದ ತತ್ತ್ವಗಳ ಪಾಲನೆ, ಲಿಂಗ ಸಮಾನತೆ, ಜನನ ಮರಣಗಳ ನೋಂದಣಿಯ ಮಹತ್ವ ಮತ್ತು ಕಾರಣಗಳು, ಮಾತಿನ ಮಹತ್ವ ಮತ್ತು ಮೌಲ್ಯ, ಮಕ್ಕಳ ಹಕ್ಕುಗಳು, ಗ್ರಾಹಕ ಸಂರಕ್ಷಣೆ, ಬಾಲಕಾರ್ಮಿಕ ಪದ್ಧತಿ, ನಮ್ಮ ರಾಷ್ಟ್ರ ಧ್ವಜವನ್ನು ಕುರಿತು, ಜನಸಂಖ್ಯಾ ಸ್ಫೋಟದ ದುಷ್ಪರಿಣಾಮಗಳು ಹಾಗೂ ನಿಯಂತ್ರಣದ ಮಹತ್ವ, ಹಣದ ಉಳಿತಾಯದ ಮಹತ್ವ ಹಾಗೂ ಮತದಾನ ಮುಂತಾದ ವಿಷಯಗಳು ಸ್ಥಾನವನ್ನು ಪಡೆದಿವೆ.

 

 

ವಾಸ್ತವಿಕ ನೆಲೆಗಟ್ಟಿನಲ್ಲಿ ಬರೆದ ಈ ಎಲ್ಲ ಲೇಖನಗಳಲ್ಲಿ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಮಾಹಿತಿಗಳು ಓದುಗರಿಗೆ ಲಭ್ಯವಿದ್ದು, ಅಗತ್ಯವಿದ್ದವರು ಅವುಗಳ ಪ್ರಯೋಜನವನ್ನು ಪಡೆಯಬಹುದಾಗಿದೆ. ಕೃತಿಯನ್ನು ಓದುತ್ತ ಹೋದಂತೆ ಇದನ್ನು ಪುಸ್ತಕದ ಓದು ಎನ್ನುವುದಕ್ಕಿಂತ ಲೇಖಕರೇ ಸಮೀಪ ಕುಳಿತು ಹೇಳುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತದೆ.

 

 

ಇದು ಶ್ರೀ ಗೊರೂರು ಅನಂತರಾಜುರವರ ಶೈಲಿಯಾಗಿದೆ. ಕೃತಿಯ ಶೀರ್ಷಿಕೆ ಕೃತಿಯಲ್ಲಿನ ಎಲ್ಲ ಲೇಖನಗಳಿಗೂ ಅನ್ವಯವಾಗುವಂತಿರುವುದು ವಿಶೇಷವಾಗಿದೆ. ಲೇಖನಗಳಲ್ಲಿ ಎಲ್ಲೂ ಕಲ್ಪನೆಗೆ ಅವಕಾಶವಿಲ್ಲದಂತೆ ಎಲ್ಲವನ್ನೂ ವಾಸ್ತವದ ಚೌಕಟ್ಟಿನಲ್ಲಿ ಕೂಡಿರುವುದು ಮತ್ತೊಂದು ವಿಶೇಷ.

 

 

ಈ ಕೃತಿಗೆ ಮುನ್ನುಡಿಯನ್ನು ಬರೆದಿರುವ ಡಾ.ಐಚನಹಳ್ಳಿ ಕೃಷ್ಣಪ್ಪರವರು “ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಜೊತೆಗೆ ನಮ್ಮ ರಾಷ್ಟ್ರಧ್ವಜದ ಕಲ್ಪನೆ, ಹುಟ್ಟು, ಬೆಳವಣಿಗೆ, ವಿಕಸನ ಮತ್ತು ಮಾನವಹಕ್ಕುಗಳು ಇವುಗಳೆಲ್ಲವುಗಳನ್ನು ಒಳಗೊಂಡಂತೆ ಗೊರೂರು ಅನಂತರಾಜು ಅವರ ‘ಮಾನವಜನ್ಮ ದೊಡ್ಡದು’ ಕೃತಿಯನ್ನು ಓದುತ್ತ ಹೋದಂತೆ ನಮಗೇ ಅರಿವಿಲ್ಲದಂತೆ ದೇಶಾಭಿಮಾನ ಒಡಲೊಳಗೆ ನುಸುಳಿ ಹರಿದಾಡಿ ಹಾಗೆ ರಕ್ತಸಂಚಾರ ನರನಾಡಿಗಳಿಗೆಲ್ಲ ಹರಡಿ ಒಂದರಗಳಿಗೆ ಹೃದಯಬಡಿತದ ಏರಿಳಿತಗಳಲ್ಲಿ ತಲ್ಲಣಗಳು ಉಂಟಾಗದೆ ಇರದು” ಎಂದಿದ್ದಾರೆ.

 

 

ಅವರ ಈ ವಾಕ್ಯಗಳು ಕೃತಿಯೊಳಗಿನ ವಿಷಯಗಳ ಪಕ್ಷಿನೋಟವನ್ನು ಸೂಚಿಸುವಂತಿವೆ. ಕೃತಿಗೆ ಬೆನ್ನುಡಿಯನ್ನು ಬರೆದಿರುವ ಕವಯಿತ್ರಿ, ಲೇಖಕಿ ಹಾಗೂ ಗಾಯಕಿ ಶ್ರೀಮತಿ ಕಲಾವತಿ ಮಧುಸೂದನ್‍ರವರು ‘ನಾವು ಏನೇ ಮಾಡಿದರೂ ಅದು ಸಾರ್ಥಕತೆಯನ್ನು ಕಾಣುವಂತಿರಬೇಕು. ಹಾಗೆಯೇ ನಿತ್ಯಜೀವನಕ್ಕೆ ಮಾರ್ಗದರ್ಶಿಯಂತಿದ್ದು ಪ್ರೇರಣೆಗೆ ಪೂರಕವಾಗಿದ್ದಾಗ ಮಾತ್ರವೇ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ.

 

 

ಈ ನಿಟ್ಟಿನಲ್ಲಿ ನಿತ್ಯಜೀವನಕ್ಕೆ ಅಳವಡಿಕೆಯಾಗುವ ವಿಭಿನ್ನ ವಿಶೇಷ ಮೌಲ್ಯಾಧಾರಿತವಾಗಿ ವೈವಿಧ್ಯಮಯವಾದ ವಿಷಯಸೂಚಿಯಾಗಿ ಕೈಪಿಡಿಯಾಗುವಂತಹ, ಸರ್ವೋಪಯೋಗಿಯಾಗುವಂತಹ ಕೃತಿಯೊಂದನ್ನು ಸದಾ ಕ್ರಿಯಾಶೀಲರೂ, ಸರಳ ಸಜ್ಜನರೂ ಆದಂತಹ ಖ್ಯಾತ ಸಾಹಿತಿ ಗೊರೂರು ಅನಂತರಾಜುರವರು ಹೊರತಂದಿದ್ದಾರೆ’ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

 

 

ಕೃತಿಯ ಕರ್ತೃ ಗೊರೂರು ಅನಂತರಾಜುರವರು ತಮ್ಮ ನುಡಿಯಲ್ಲಿ ಈ ಪುಸ್ತಕದ ರಚನೆಗೆ ಕಾರಣವಾದ ಅಂಶಗಳನ್ನು ತಿಳಿಸಿದ್ದಾರೆ. ವಿಜಯಲಕ್ಷ್ಮಿ ಪ್ರಕಾಶನದಿಂದ ಹೊರಬಂದ 160 ಪುಟಗಳ ಈ ಕೃತಿ ಓದುಗರಿಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡುವುದು ಮಾತ್ರವಲ್ಲದೆ ನವಿರಾದ ಹಾಸ್ಯದ ಕಲೆಗಾರಿಕೆಯಿಂದ ಕೂಡಿ ಮನಸ್ಸಿಗೆ ಮುದವನ್ನು ನೀಡುವಂತಿದೆ. ಮುಂದಿನ ದಿನಗಳಲ್ಲಿ ಇವರ ಮತ್ತಷ್ಟು ಮೌಲ್ಯಯುತ ಕೃತಿಗಳು ಹೊರಬರಲಿ ಎನ್ನುವ ಆಶಯ ನನ್ನದು.

 


ಲೇಖಕಿ : ಲಲಿತ ಎಸ್
(ಕವಯಿತ್ರಿ, ಲೇಖಕಿ)
ಸಕಲೇಶಪುರ

Leave A Reply

Your email address will not be published.