ಹೃದಯದಲಿ ಪ್ರೀತಿಯ ಬೀಜ ಬಿತ್ತಿದ ” ಅನುರಾಗದ ಅನುರಣನ”

ಹೃದಯದಲಿ ಪ್ರೀತಿಯ ಬೀಜ ಬಿತ್ತಿದ ” ಅನುರಾಗದ ಅನುರಣನ”

ಅನುರಾಗದ ಅನುರಣನ – ಕವನ ಸಂಕಲನ
ಲೇಖಕರು – ಶ್ರೀಶೈಲ್ ಹೆಬ್ಬಳ್ಳಿ
ಬೆಲೆ – ರೂ.120
ಪುಟಗಳು – 114
ವರ್ಷ – 2023
ಪ್ರಕಾಶಕರು – ಅಕ್ಷರ ಮಂಟಪ

 

 

ಪ್ರೀತಿ, ಪ್ರೇಮ, ಸ್ನೇಹ, ಮಧುರತೆ, ಅಕ್ಕರೆ, ಮಮತೆ, ನಲ್ಮೆ ಹೀಗೆ ವಿವಿಧ ಪದಗಳಿಂದ ಒಂದು ಸಂಬಂಧ ಬೆಸೆದರೆ ಪ್ರತಿಯೊಂದು ಬಾಂಧವ್ಯಕ್ಕೂ ಅದರದೇ ಆದ ಸ್ಥಾನ – ಮಾನ, ಘನತೆ, ಗೌರವಗಳಿವೆ. ಆದರೂ ಪ್ರೀತಿಗೆ ಇರುವ ಸ್ಥಾನವೇ ಬೇರೆಯಾಗಿದೆ ಪ್ರತಿಯೊಂದು ಭಾಂದವ್ಯದಲ್ಲೂ ಪ್ರೀತಿ ಅವಶ್ಯಕವಾಗಿರುತ್ತದೆ.

 

 

ಶ್ರೀಶೈಲ ಹೆಬ್ಬಳ್ಳಿಯವರು ಈಗಾಗಲೇ ಜೀವ ಕಾರುಣ್ಯದ ಮಿಡಿತ, ಗೋಡೆಯ ಸುಣ್ಣ ಅಣಕಿಸುತ್ತಿದೆ, ಅನುರಾಗದ ಅನುದಾನ ಅವನ ಸಂಕಲನಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಜೊತೆಗೆ 1486 ವಚನಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

 

 

ಇದು ಇವರ ಮಹಾನ್ ಸಾಧನೆ ಎಂತಲೇ ಹೇಳಬಹುದು. ಪ್ರಸ್ತುತ ಅನುರಾಗದ ಅನುರಣನ ಕವನ ಸಂಕಲ. 50 ಕವನಗಳ ಸಂಗ್ರಹ ಸಂಕಲನವಾಗಿದೆ. ಕೃತಿಗೆ ಸುಂದರ ರೇಖಾ ಚಿತ್ರ ಜಬೀವುಲ್ಲಾ ಎಂ. ಅಸದ್ ರವರು, ಮುಖಪುಟ ವಿನ್ಯಾಸವನ್ನು ರಾಘವೇಂದ್ರ ಕೊಲ್ಲೇಲೂರರವರು ರಚಿಸಿದ್ದು, ಅಕ್ಷದ ಮಂಟಪ ಪ್ರಕಾಶನ ಬೆಂಗಳೂರುರವರು ಸಂಕಲನವನ್ನು ಪ್ರಕಟಿಸಿದ್ದಾರೆ.ಶೀರ್ಷಿಕೆಗೆ ತಕ್ಕಂತೆ ಸೂಕ್ತವಾದ ಮುಖಪುಟ ರಚಿಸಲಾಗಿದೆ. ಕೃತಿಗೆ ಮುನ್ನುಡಿಯನ್ನು ಡಾ.ಫಕೀರನಾಯ್ಕ ಗದ್ದಿಗೌಡರರವರು, ಬೆನ್ನುಡಿಯನ್ನು ಡಾ.ವೈ.ಎಂ. ಯಾಕೊಳ್ಳಿರವರು ಬರೆದಿದ್ದಾರೆ.

 

 

ಗಟಾರಗಳಂತೂ ಬಿಲ್ಲಿಗಾಗಿ
ಕಾಯುತ್ತಿರುತ್ತವೆ
ನಂತರ ತುಣುಕು ತುಣುಕು
ಎದ್ದೆದ್ದು ಕೂಗಾಡಿ ಚೀರಾಡಿ
ಹೊಟ್ಟೆಗೆ ಸರಿಯಾಗಿ ಸಿಮೆಂಟು ಊಟ
ಹಾಕಿಲ್ಲವೆಂದು ಗೋಗರೆದು
ಕುಡಿಯಲಿಕ್ಕೆ ಸರಿಯಾಗಿ ನೀರು
ಕೊಟ್ಟಿಲ್ಲದಕ್ಕೆ ತಾವು ಗಟ್ಟಿಯಾಗಿಲ್ಲವೆಂದು
ಆಳುವವರ, ಗುತ್ತಿಗೆದಾರರ ವಿರುದ್ಧ
ಸತ್ಯಾಗ್ರಹಕ್ಕಿಳಿಯುತ್ತವೆ.
‘ಅಭಿವೃದ್ಧಿ ಮರೀಚಿಕೆ’ ಎಂಬ ಕವನದಲ್ಲಿ ಶ್ರೀಶೈಲರವರು ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಅನಾವರಣಗೊಳಿಸಿದ್ದಾರೆ.

 

 

ಸರ್ಕಾರದ ಕೆಲಸ ದೇವರ ಕೆಲಸ ಎಂದು ಅರಿತು ಲಾಭಕ್ಕಾಗಿ ದುಡಿಯದೇ ಇರುವ ಹಳೆಯ ದಿನಗಳು ಮಾಯವಾಗಿ ಸಿಕ್ಕ ಕೆಲಸದಲ್ಲಿ ಬರೀ ಲಾಭಕ್ಕಾಗಿ, ಬಾಯಿ ಬಿಟ್ಟು ಕುಳಿತು, ಬಾಯಿ ಬಾಕರ ಕುರಿತು ತಿಳಿಸುತ್ತಾ, ಸಿಕ್ಕ ಕಾರ್ಯದಲ್ಲಿ ಬಿಲ್ಲಿಗಾಗಿ ಕಾಯುತ್ತಾ ಕುಳಿತು ಅವು ಒಮ್ಮೆಲೇ ಬರದೇ ಕಂತು ಕಂತುಗಳಾಗಿ ಬರುತ್ತದೆ. ಅದೇ ನೆಪ ಇಟ್ಟುಕೊಂಡು ಸಿಮೆಂಟು ಹೆಚ್ಚಿಗೆ ಹಾಕದೇ ಸುಭದ್ರವಾಗಿ ಕಟ್ಟದೆ ಇರುವುದರಿಂದ ಅವುಗಳು ಕೆಲವೇ ದಿನಗಳಲ್ಲಿ ಬಾಯಿ ತೆರೆದು ಅಪಘಾತಕ್ಕೆ ದಾರಿಯಾಗುತ್ತವೆ.ಇಂತಹ ಗುತ್ತಿಗೆದಾರರಿಗೆ ತಮ್ಮ ಕವನದ ಮೂಲಕ ಛೀಮಾರಿ ಹಾಕಿದ್ದಾರೆ.

 

 

ಹೊನಲು ಝರಿ ಹಳ್ಳಗಳ ಸಿರಿ
ಮೊರೆ ಮೊರೆವ ತೆರೆಗಳು
ತರ ತರ ಸುವಾಸನೆಯ
ವಿವಿಧ ಬಣ್ಣದ ಹೂಗಳು
ಆಗ ನೂರು ವರ್ಷಗಳ ಹಿಂದೆ.
‘ಗುರು ನಿಸರ್ಗ’ ಎಂಬ ಕವನದಲ್ಲಿ ಕಾಡು ಸುಂದರವಾಗಿ ಬೃಹತ ಗಿಡಗಳಿಂದ ಕೂಡಿ ಹಸಿರು ಕಂಟಿಗಳಿಂದ ಕೂಡಿ ನಳನಳಿಸುತ್ತಿತ್ತು. ರಪರಪನೆ ಧೋ ಎಂದು ಸುರಿವ ಮಳೆಯ ತುಂತುರು ಹನಿಗೆ ಕಾಮನಬಿಲ್ಲು ನೋಡಿದಾಗ ಮನ ಮುದಗೊಳ್ಳುತ್ತಿತ್ತು. ವಿಧ ವಿಧ ಬಣ್ಣಗಳ ಹೂಗಳನ್ನು ನೋಡಿ ಸುವಾಸನೆ ಪಡೆದಾಗ ಮನ ಹರ್ಷಗೊಳ್ಳುತ್ತಿತ್ತು. ಕಾಡಿನ ತುಂಬಿರುವ ಪ್ರಾಣಿಗಳ ಓಟ, ಚಿರಾಟ, ಜಿಗಿದಾಟ ಧರೆಗೆ ಸ್ವರ್ಗವೇ ಇಳಿದಂತಾಗುತ್ತಿತ್ತು. ಆದರೆ ಇಂದು ಮಾನವನ ಸ್ವಾರ್ಥಕ್ಕಾಗಿ ಇವೆಲ್ಲವನ್ನೂ ಹಾಳು ಮಾಡಿ ತನ್ನ ನಾಶಕ್ಕೆ ಆಹ್ವಾನ ನೀಡಿದ್ದಾನೆ ಎಂದು ತಮ್ಮ ಕವನದ ಮೂಲಕ ಮರುಗುತ್ತಿದ್ದಾರೆ.

 

 

ಜಗದಲ್ಲಿ ಎಲ್ಲರಿಗೊಂದು ವ್ಯಕ್ತಿತ್ವ
ಅವರಿಗವರೇ ಶ್ರೇಷ್ಠ ಕನಿಷ್ಠ
ನಾಲ್ಕು ಮುತ್ತು ವಿಚಾರಗಳು
ಮೆಲೆದಿರಬಹುದು
ನನ್ನ ಭಾರ ನನಗೇ ಇರಲಿ
ಗುರಿ ತಲುಪುವುದೋ, ವಿಜೃಂಭಿಸಬಹುದೋ?
ಅದು ನನ್ನ ಲಲಾಟ
ನಿನ್ನ ಅಭಯಹಸ್ತ ನನಗೆ ಬೇಡ.
ಜಗತ್ತಿನಲ್ಲಿ ಜನಿಸಿದ ಪ್ರತಿ ಮಾನವನಿಗೂ ತನ್ನದೇ ಆದ ವ್ಯಕ್ತಿತ್ವ, ವಿಚಾರಗಳಿರುತ್ತವೆ. ಅವರಿಗೆ ಆ ವಿಚಾರಗಳೇ ಶ್ರೇಷ್ಠವಾಗಿರುತ್ತವೆ. ತನ್ನ ವ್ಯಕ್ತಿತ್ವವನ್ನು ಮತ್ತೊಬ್ಬರ ಮೇಲೆ ಹೇರುವುದು ಸೂಕ್ತವಲ್ಲ. ಸಂಬಂಧಗಳಲ್ಲಿ ರಾಜಕಾರಣ ಪ್ರವೇಶ ಮಾಡಿ ಸಂಬಂಧ ಹಾಳಾಗುವುದು ಬೇಡ. ಇದರಿಂದ ಮನಸ್ಸಿಗೆ ಘಾಸಿಯಾಗುವುದೇ ಹೊರತು ಸಂಬಂಧ ಸಲೀಲ ವಾಗಿರುವುದಿಲ್ಲ. ಆದ್ದರಿಂದ ನನ್ನ ಆದರ್ಶಗಳೇ ನಿನ್ನ ಆದರ್ಶಗಳಾಗಬೇಕು ಎಂದು ತಮ್ಮದೇ ಆದರ್ಶಗಳನ್ನು ಮತ್ತೊಬ್ಬರ ಮೇಲೆ ಹೇರುವ ಜನರಿಗೆ ತಮ್ಮ ‘ಒಡಲ ಕಿಚ್ಚಿನ ಹಿಲಾಲು’ ಕವನದ ಮೂಲಕ ತಿಳಿ ಹೇಳಿದ್ದಾರೆ.

 

 

ಎದೆಗೆ ಅಕ್ಷದ ಜ್ಯೋತಿ ಹಣತೆ
ಹಚ್ಚಿದ ಗುರು ಭಾಸ್ಕರ ಮಮತೆ
ಬೆರಳು ಹಿಡಿದು ಅಕ್ಷದ ತೀಡಿದ
ಮುದ ನೀಡಿ ಮನಸ್ಸು ಅರಳಿಸಿದ
ಗುರು ಪ್ರಭುವಿಗೆ ನಮನ.
‘ಅಕ್ಷರ ಸಂಸ್ಕೃತಿ’ ಎಂಬ ಕವನದಲ್ಲಿ ತಿದ್ದಿ, ತೀಡಿ ವಿದ್ಯೆ ನೀಡಿದ ಗುರು, ಮಕ್ಕಳ ಬಾಳಿನಲ್ಲಿ ಅಕ್ಷರದ ಜ್ಯೋತಿ ಹಚ್ಚುವವರು. ಬೆರಳನ್ನು ಹಿಡಿದು ಅಕ್ಷರ ತಿದ್ದಿ ಬಾಳಿನ ದಾರಿ ದೀಪವಾಗಳಾಗಿರುತ್ತಾರೆ. ವಿದ್ಯಾರ್ಥಿಗಳ ಬದುಕಿನ ರಥಕ್ಕೆ ಸಾರಥಿಯಾಗಿ ಬಾಳ ದಾರಿ ತೋರುವವರು. ಕತ್ತಲೆಯ ಅಂಧಕಾರಕ್ಕೆ ಬೆಳಕಿನ ಜ್ಯೋತಿ ಇಟ್ಟು ಬಾಳ ಬೆಳಗಿಸುವವರು. ಕಲೆಯನ್ನು ಕರಗತ ಮಾಡಿಸುವವರು. ನಾಡಿನ ಸಂಸ್ಕೃತಿ ತಿಳಿಸಿ ಸುಸಂಸ್ಕೃತರನ್ನಾಗಿ ಮಾಡಿಸುವವರು ಗುರುಗಳು. ಅಂಥ ಗುರುವಿಗೆ ಮನಃಪೂರ್ವಕವಾಗಿ ನಮನ ಸಲ್ಲಿಸಿದ್ದಾರೆ.

 

 

ರೈತನಿಗೆ ಜೈ, ಸೈನಿಕನಿಗೆ ಜೈ ಅಂತಾರ
ಅವರ ಬುಡಕ ಕತ್ತಿ ಮಸಿತಾರ
ಒಳಗ ಸುಲಿಗೆ ಮಾಡ್ತಾರ
ಮ್ಯಾಲ ಗೀತೆ ಹಾಡ್ತಾರ
ದೇಶ ನೆನೆಯಾಗಿ ನೆರಿಯಾಗಿ
ಬಿರುಕು ಬಿಡ್ತಾಯಿದೆ.
‘ದೇಶ ಎತ್ತ ಸಾಗುತ್ತಿದೆ’ ಎಂಬ ಕವನದಲ್ಲಿ ಮಾನವನ ಆಸೆಗಳಿಗೆ ಕಾಡು ನಾಶವಾಗುತ್ತಿರುವುದರಿಂದ ಕಾಡಿಗೆ ಹಚ್ಚಿದ ಬೆಂಕಿ ಧಗಧಗಿಸಿ ಉರಿದು ಕಾಡು ಪ್ರಾಣಿಗಳು ನಾಡಿಗೆ ಆಗಮಿಸುತ್ತಿವೆ. ವೇಷ, ಭೂಷಣ ಮನುಷ್ಯನದಾಗಿದ್ದು ಮುಖವಾಡ ಪ್ರಾಣಿ ತರಹ ಎಂದು ಮಾರ್ಮಿಕವಾಗಿ ಸಾಧು ಪ್ರಾಣಿಗಳಂತೆ ಮುಖವಾಡ ಹಾಕಿ ಸಮಾಜ ಘಾತುಕವಾಗುತ್ತಿರುವ ಮಾನವನ ಕುರಿತು ಹೇಳುತ್ತಾ, ಜೇನಿನಂತೆ ಮಾತು ಮೃಗಯಂತೆ ಕೃತಿ, ಅಂತರಂಗದಲ್ಲಿ ಮೋಸ, ವಂಚನೆ ಗುಣ ಬಹಿರಂಗದಲ್ಲಿ ಭಕ್ತಿ, ರೈತನಿಗೆ, ಸೈನಿಕರಿಗೆ ಝೇಂಕಾರ ಹಾಕಿ ಅವರಿಗೆ ಮೋಸ ಮಾಡಲು ಕತ್ತಿ ಮಸಿಯುತ್ತಾರೆ. ಇಂಥ ಕ್ರೂರ ಮನಸ್ಸಿನ ಜನರಿಂದ ದೇಶ ಅಧೋಗತಿಗೆ ಸಾಗುತ್ತಿದೆ ಎಂದು ತಮ್ಮ ಕವನದ ಮೂಲಕ ಮನಸ್ಸನ್ನು ಘಾಸಿಗೊಳಿಸಿಕೊಂಡಿದ್ದಾರೆ.

 

 

ಪ್ರವಚನ ಪಿತಾಮಹ
ಪ್ರವಚನದಲ್ಲಿ ಸಮಯ, ಶಿಸ್ತು
ನಿಂದನೆಯ ಎಳೆಯೂ ಇಲ್ಲ
ಕೊಂಕು ಮಾತಿಲ್ಲ, ಸ್ವ ಪ್ರಶಂಸೆ
ಪದವೇ ಮಹಾತ್ಮರ ನಿಘಂಟಿನಲ್ಲಿಲ್ಲ.
‘ಶತಮಾನದ ಸಂತ’ ಎಂಬ ಶೀರ್ಷಿಕೆ ಅಡಿಯಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳವರ ಕುರಿತು ತಿಳಿಸುತ್ತಾ, ಸಿದ್ದೇಶ್ವರ ಶ್ರೀಗಳು ಸದಾ ಸುಂದರ, ಆಧ್ಯಾತ್ಮಿಕ ಜೀವನ ಆಯ್ದುಕೊಂಡವರು. ಸದಾ ಶಾಂತ ಮನಸ್ಥಿತಿ ಹೊಂದಿದ್ದರು. ಆಳ ಅಧ್ಯಯಾನುಭವವನ್ನು ಹೊಂದಿದ್ದರು. ಸಮಯ, ಶಿಸ್ತು ಹೊಂದಿದ ಇವರು ಎಂದೂ ಯಾರ ನಿಂದನೆಗೂ ಒಳಗಾಗಲಿಲ್ಲ.

 

 

ದ್ವೇಷ, ಅಸೂಯೆ, ರಾಗ ಇವರ ಹತ್ತಿರ ಎಂದೂ ಸುಳಿಯದ ಗುಣಗಳಾಗಿದ್ದವು. ನುಡಿದಂತೆ ನಡೆದರು, ನಡೆದಂತೆ ನುಡಿದರು. ಶ್ರೀಗಳು ಅಸ್ತಂಗತರಾದಾಗ ಶ್ರೀಶೈಲರವರು ತಮ್ಮ ನುಡಿ ಪುಷ್ಪಗಳನ್ನು ಕವನದ ಮೂಲಕ ಅರ್ಪಿಸಿದ್ದಾರೆ.

 

 

ಇಲ್ಲಿನ ಕವನಗಳು ವಿವಿಧ ನೆಲೆಯಿಂದ ಬಂದಿವೆ. ಸುತ್ತಮುತ್ತಲಿನ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ಬಂದ ಕವನ ಕೆಲವಾದರೆ, ಚಿಂತನೆಗೆ ಒರೆ ಹಚ್ಚುವ ಕವನಗಳು ಕೆಲವು ಇವೆ. ಇವರ ಕವನಗಳಲ್ಲಿ ಅರ್ಪಣೆ ಇದೆ. ಪ್ರೀತಿ ಇದೆ. ಪರಿಸರದ ಕುರಿತು ಕಾಳಜಿ ಇದೆ. ನಲುಮೆಯ ಅಕ್ಕರೆ ಇದೆ. ಪ್ರತಿ ಜೀವಿಯ ಕುರಿತು ಕಾಳಜಿ ಇದೆ. ಶ್ರೀಶೈಲರವರಿಂದ ಇನ್ನೂ ಹೆಚ್ಚಿನ ಕೃತಿಗಳು ರಚಿತವಾಗಿ ಸಾರಸ್ವತ ಲೋಕ ಸಮೃದ್ಧಗೊಳ್ಳಲಿ ಎಂದು ಶುಭ ಕೋರುವೆ.

 

ಬರಹ : ಶಬಾನಾ ಅನ್ನಿಗೇರಿ 

Leave A Reply

Your email address will not be published.